ನರ್ಮದಾ 1

	1943-. ನೃತ್ಯದಲ್ಲಿ ವಿದ್ಯೆಯ ಜೊತೆಗೆ ನಯ, ವಿನಯಗಳೂ ಕೂಡಿ ಬಂದಾಗ ಶಿಷ್ಯರು ತಾವೇ ತಾವಾಗಿ ಆಕರ್ಷಿತರಾಗುತ್ತಾರೆ. ಹೀಗಾದಾಗ ಸಂಬಂಧಿತ ಗುರುವಿನ ನೃತ್ಯ ಶಾಲೆಯ ಪ್ರತಿಷ್ಠೆಯೂ ಹೆಚ್ಚುತ್ತದೆ. ಶಿಷ್ಯ ಸಂಪತ್ತೂ ಬೆಳೆಯುತ್ತದೆ.

	ಇಂತಹ ಗುಣಗಳಿಂದ ಕೂಡಿ, ಜನಪ್ರಿಯತೆಗೆ ಕಾರಣವಾಗಿರುವ ಶಾಲೆ ನರ್ಮದಾ ಅವರ ಶಕುಂತಲಾ ನೃತ್ಯಾಲಯ, ಒಂದು ಹಿರಿಯ ಪರಂಪರೆಯಲ್ಲಿ ನೃತ್ಯಾಭ್ಯಾಸಮಾಡಿ, ತಮ್ಮ ಪ್ರದರ್ಶನಗಳಿಂದ ಜನಮನವನ್ನು ಗೆದ್ದು, ಶಿಕ್ಷಕಿಯಾಗಿಯೂ ಅಷ್ಟೇ ಜನಾನುರಾಗವನ್ನು ಗಳಿಸಿರುವ ಕೀರ್ತಿ ನರ್ಮದಾರಿಗೆ ಸಲ್ಲಬೇಕು.

	1943ರಲ್ಲಿ ಜನಿಸಿದ ನರ್ಮದಾ ತನ್ನ ಚಿಕ್ಕ ವಯಸ್ಸಿನಲ್ಲೇ ಸಂಗೀತ, ನೃತ್ಯಗಳಿಂದ ಆಕರ್ಷಿತರಾದವರು. ತಂದೆ ಡಾ. ಕೆ. ರಾಮ್‍ರಾವ್, ತಾಯಿ ಶಕುಂತಲಾ ಸಂಗೀತದಲ್ಲಿ ಅಭಿರುಚಿ ಉಳ್ಳವರು. ತಾಯಿ ಹಾಡುವಾಗಲೆಲ್ಲಾ ನರ್ಮದಾ ಅದರತ್ತ ಹೆಚ್ಚು ಗಮನ ಹರಿಸಿ, ತಾನೂ ಗುನುಗುತ್ತಾ, ಲವಲವಿಕೆಯಿಂದ ಕುಣಿಯುತ್ತಿದ್ದರು. ಇಂತಹ ಪ್ರತಿಭೆಯನ್ನು ಬೆಳೆಸಬೇಕೆಂದು ಬಯಸಿ ತಂದೆ ಮಗಳನ್ನು ಚಾಮರಾಜಪೇಟೆಯ ತಮ್ಮ ನಿವಾಸದ ಸಮೀಪವಿದ್ದ ನೃತ್ಯ ಗುರು ವಿ.ಎಸ್. ಕೌಶಿಕರ ಸನಾತನ ಕಲಾಕ್ಷೇತ್ರದಲ್ಲಿ ನೃತ್ಯ ಶಿಕ್ಷಣಕ್ಕೆ ಸೇರಿಸಿದರು. ಅನಂತರ ತಂಜಾವೂರಿನ ಗುರು ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆ ಅವರ ಮೊಮ್ಮಗ ಕಿಟ್ಟಪ್ಪ ಪಿಳ್ಳೆ ಮತ್ತು ಅವರ ಸೋದರ ಮಾವ ಪಂದನಲ್ಲೂರು ಮುತ್ತಯ್ಯ ಪಿಳ್ಳೆ ಅವರಲ್ಲಿ ನರ್ಮದಾ ಸಾಂಗವಾಗಿ ಶಿಕ್ಷಣವನ್ನು ಪಡೆದು, 1952ರಲ್ಲಿ ಎಂದರೆ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿದರು. ಗುರು ಕಿಟ್ಟಪ್ಪ ನರ್ಮದ ಅವರ ಶ್ರದ್ಧೆ, ಆಸಕ್ತಿಯಿಂದ ಉತ್ತೇಜಿತರಾಗಿ ತಾವು ಕಲಿತಿದ್ದ ವಿದ್ಯೆಯನ್ನು ಮುಕ್ತವಾಗಿ ಧಾರೆಯೆರೆದರು. ಆ ಪೈಕಿ ದೇವಾಲಯ ನೃತ್ಯ ಪದ್ಧತಿಯ ನವಸಂಧಿ ನೃತ್ಯ, ಮದರಾಸಿನ ತಮಿಳು ಇಸ್ವೆ ಸಂಘದಲ್ಲಿ ನವಸಂಧಿ ನೃತ್ಯ ಪ್ರದರ್ಶನವಾಯಿತು. ಕರ್ಣಾಟಕದ ಕಲಾವಿದರೆಂದರೆ ಮೂಗು ಮುರಿಯುತ್ತಿದ್ದ ಮದರಾಸಿನ ಕಲಾವಿದರು, ನರ್ಮಾದರವರ ನವಸಂಧಿ ನೃತ್ಯ ಪ್ರದರ್ಶನವನ್ನು ಬಹುವಾಗಿ ಮೆಚ್ಚಿಕೊಂಡರು. ಗುರು-ಹಿರಿಯರಿಂದ ಮೆಚ್ಚುಗೆಗಳಿಸಿ, ನೃತ್ಯವನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ. ಅದೇ ಶತಮಾನದ ಎಪ್ಪತ್ತರ ದಶಕದಲ್ಲಿ ಸ್ಥಾಪಿಸಲಾದ, ತಮ್ಮ ತಾಯಿಯವರ ಹೆಸರನ್ನು ಹೊಂದಿರುವ ನರ್ಮದಾರ ಶಕುಂತಲಾ ನೃತ್ಯಾಲಯ ಅನೇಕ ಹೆಸರಾಂತ ನೃತ್ಯ ಕಲಾವಿದರ ವಿಕಾಸಕ್ಕೂ ಕಾರಣವಾಗಿದೆ. 

	ಆದರೆ ನರ್ಮದಾ ಪ್ರದರ್ಶನವನ್ನು ಬದಿಗೊತ್ತಿ, ಶಿಕ್ಷಣದ ಆಸರೆಯನ್ನು ಪಡೆದುದೂ ಒಂದು ವಿಷಾದ ಘಟನೆಯಿಂದ. ಸಂಪ್ರದಾಯದಂತೆ, ನರ್ಮದಾ ಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗಿ ತನ್ನ ಸಂಸಾರವನ್ನು ಹೈದರಾಬಾದಿನಲ್ಲಿ ಹೂಡಿದಾಗ, ನೃತ್ಯ ಸ್ವಲ್ವ ಹಿಂದೆ ಸರಿದಿದ್ದು ಸ್ವಾಭಾವಿಕವೇ. ಆಗಾಗ ಎರಡೂ ಸಂಸಾರಗಳು ಸೇರಿದಾಗ ನರ್ತಿಸುತ್ತಿದ್ದರೇ ವಿನಹ, ಮೊದಲಿನಂತೆ ಸಾರ್ವಜನಿಕವಾಗಿ ಆಕೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು ವಿರಳ. ದಾಂಪತ್ಯ ಜೀವನ ಸುಗಮವಾಗಿದ್ದರೂ, ಒಂದರ ಮೇಲೊಂದರಂತೆ ಎರಡು ಗರ್ಭಪಾತಗಳನ್ನು ಅನುಭವಿಸಿ, ನರ್ಮದಾರ ಮನಃಸ್ಥಿತಿಯೂ ಹದಗೆಟ್ಟಿತ್ತು. ಇಷ್ಟು ಸಾಲದೆಂಬಂತೆ ವಿಧಿ ತನ್ನ ಕ್ರೂರ ದೃಷ್ಟಿಯನ್ನು ಇನ್ನೂ ತೀವ್ರವಾಗಿ ನರ್ಮದಾರ ಮೇಲೆ ಹರಿಸಿತು. ಆಕೆಯ ಪತಿ, ಇಂಜಿನಿಯರ್ ಕೃಷ್ಣಮೂರ್ತಿ, ರಸ್ತೆ ಅಪಘಾತ ಒಂದರಲ್ಲಿ ಅಸುನೀಗಿದ್ದರು. ಆಗ ಆಕೆ ಆರು ತಿಂಗಳ ಗರ್ಭಿಣಿ. ಅಂತಹ ಚಿಂತಾಜನಕ ಮನಃಸ್ಥಿತಿಯಲ್ಲಿ ಆಕೆ ತೌರಿಗೆ ಮರಳಬೇಕಾಯಿತು. ಗಂಡು ಶಿಶುವಿನ ತಾಯಾದಳು. ಆ ಪಿತೃವಿಹೀನ ಶಿಶುವಿನ ಪಾಲನೆಯಲ್ಲಿ ಕಾಲ ತಳ್ಳಿದರು. ಆದರೆ ಆಕೆಗೆ ಸ್ವಲ್ಪ ನೆಮ್ಮದಿ ದೊರತದ್ದು, ತಾನು ಕಲಿತ ವಿದ್ಯೆಯನ್ನು ಹಂಚಲು ಇಂದು ಖ್ಯಾತಿಗಳಿಸಿರುವ ಶಕುಂತಲಾ ನೃತ್ಯಾಲಯವನ್ನು ಆರಂಭಿಸಿದ ನಂತರ. ದಿನಗಳೆದಂತೆ ಶಾಲೆ ಹೆಚ್ಚು ಹೆಚ್ಚು ನೃತ್ಯಾಕಾಂಕ್ಷಿಗಳನ್ನು ಆಕರ್ಷಿಸಿ ಯುವಕ-ಯುವತಿಯರಿಂದ ತುಂಬಿ ತುಳುಕುತ್ತಿದ್ದು ನರ್ಮದಾರಿಗೆ ಮನಪರಿವರ್ತನೆಗೆ ಒಂದು ಸೊಗಸಾದ ಸಾಧನಾವಾಯಿತು. ಆಕೆಯ ಗಮನವೆಲ್ಲ ಸತತವಾಗಿ ನೃತ್ಯ ಸಂಯೋಜನೆ, ಸಂಚಾರಿಗಳ ಜೋಡಣೆ, ಜತಿಗಳ ವಿತರಣೆಗಳಿಂದ ಕೂಡಿದ ನೃತ್ಯ ಬಂಧ, ಅಭಿನಯಗಳು ಅಂದ ಚೆಂದವನ್ನಾಗಿ ಮಾಡುವತ್ತ ಕೇಂದ್ರೀಕೃತವಾಯಿತು.

	ಒಂದು ಶಾಲೆಯ ಯಶಸ್ಸನ್ನು ಅದರ ಶಿಷ್ಯ ಸಂಸತ್ತಿನಿಂದ ಗುರುತಿಸಲಾಗುತ್ತದೆ. ಈ ನಿಟ್ಟಿನಲ್ಲಿ ನರ್ಮದಾರ ಸಾಧನೆ ಹೆಮ್ಮೆ ಪಡುವಂತಹುದು ತನ್ನ ಎಂದಿನ ಶಿಷ್ಯರಲ್ಲದೇ. ಆಕೆಯ ಪಾಠಾಂತರರ ವೈಖರಿ, ಸರಕಿನಲ್ಲಿ ಕಂಡುಬರುವ ವೈವಿಧ್ಯತೆಗಳಿಂದ ಆಕರ್ಷಿತರಾಗಿ ಇತರ ಶಾಲೆಯ ಹಿರಿಯ ಶಿಷ್ಯರಲ್ಲಿ ಅನೇಕರು ನರ್ಮದಾರಲ್ಲಿ ಉನ್ನತ ಮಾರ್ಗದರ್ಶನದ ಸಲುವಾಗಿ ಬರಲಾರಂಭಿಸಿದರು. ಅವರುಗಳಲ್ಲಿ ಸ್ವತಃ ಶಾಲೆಗಳನ್ನು ನಡೆಸುತ್ತಿದ್ದ ನೃತ್ಯಗುರುಗಳಾದ ಲಲಿತಾ ಶ್ರೀನಿವಾಸನ್, ಭಾನುಮತಿಯವರಲ್ಲದೇ ವಿಶ್ವಖ್ಯಾತಿ ಗಳಿಸಿದ, ಕೂಚುಪುಡಿ ಶೈಲಿಯ ಪ್ರತಿಪಾದಕರಾದ ಮಂಜು ಭಾರ್ಗವಿಯಂತಹವರೂ ಸೇರಿದ್ದರು. ಇವರುಗಳಿಗಿಂತ ಕಿರಿಯ ತಲೆಮಾರಿನವರಾದ ಶ್ರೀದೇವಿ, ಲಕ್ಷ್ಮಿಗೋಪಾಲಸ್ವಾಮಿ ಮೊದಲಾದವರು, ನಗರದ ಬೇರೆ ಶಾಲೆಯಲ್ಲಿ ಕಲಿತವರಾಗಿದ್ದರು. ಇವರಲ್ಲಿ ಲಕ್ಷ್ಮಿ, ಚನ್ನೈನ ಪ್ರತಿಷ್ಠಿತ ಉತ್ಸವ ಒಂದರಲ್ಲಿ ನರ್ತಿಸಿ, ಆ ವರ್ಷದ ಅತ್ಯುತ್ತಮ ಕಲಾವಿದೆ ಎಂಬ ಪ್ರಶಸ್ತಿಗೆ ಭಾಜನರಾಗಿ, ಆ ಮೂಲಕ ನರ್ಮದಾ ಆ ಸಾಲಿನ ಅತ್ಯುತ್ತಮ ಗುರು ಎಂಬ ಪ್ರಶಂಸೆ ಗಳಿಸುವಂತಾಯಿತು. ನರ್ಮದಾರ ನೇರ ಶಿಷ್ಯರ ದಾಖಲೆಯೂ ಕಡಿಮೆ ಏನಲ್ಲ. ಈಕೆಯ ಹಿರಿಯ ಶಿಷ್ಯರಾದ ಡಾ|| ಸಾವಿತ್ರಿ ರಾಮಯ್ಯ, ಡಾ|| ಶ್ರೀಧರ್, ಪದ್ಮಿನಿ ಶಿರೀಶ್, ಪ್ರವೀಣ್ ಕುಮಾರ್‍ರಲ್ಲದೇ, ಇತ್ತೀಚೆಗೆ ನಾಯರ್ ಸಹೋದರಿಯರೆಂದೇ ಹೆಸರುಗಳಿಸಿರುವ ವೀಣಾ ಮತ್ತು ಧನ್ಯ ಇವರೆಲ್ಲರೂ. ತಮ್ಮ ನಿಖರವಾದ, ಶಾಸ್ತ್ರಸಮ್ಮತವಾದ ನೃತ್ಯದಿಂದ ಶಾಲೆಯ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಸ್ವಲ್ಪ ದೇಹಾರೋಗ್ಯದ ತೊಂದರೆ ಇದ್ದರೂ. ಎಡಬಿಡದೆ, ನಿಷ್ಠೆಯಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ.

	ಈ ಹಿರಿಯ ನೃತ್ಯಗುರು, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2001ನೇ ಸಾಲಿನ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕøತರು. 
										(ಎಸ್.ಎನ್.ಚಂದ್ರಶೇಖರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ